ವಿಷ್ಣುಗೋಪ
 	ತಲಕಾಡು ಗಂಗವಂಶದ ದೊರೆ (ಸು. 420-40). ಹರಿವರ್ಮನ ಮೂರನೆಯ ಮಗ. ತನ್ನ ಅಣ್ಣ ಇಮ್ಮಡಿ ಮಾಧವನ ಅನಂತರ ಪಟ್ಟಕ್ಕೆ ಬಂದ. ಇಮ್ಮಡಿ ಮಾಧವನಿಗೂ ವಿಷ್ಣುಗೋಪನಿಗೂ ನಡುವೆ ಇದ್ದ ವೀರವರ್ಮನ ಇಮ್ಮಡಿ ಮಾಧವನ ಆಳ್ವಿಕೆಯಲ್ಲಿ (ಸು. 400-20) ಯುವರಾಜನಾಗಿರುವಾಗಲೇ ತೀರಿಹೋದುದರಿಂದ ವಿಷ್ಣುಗೋಪ ಪಟ್ಟಕ್ಕೆ ಬಂದ. ವಿಷ್ಣುಗೋಪನ ಅನಂತರವೂ ಅವನ ಪೀಳಿಗೆಯೇ ಮುಂದುವರಿಯುವುದರಿಂದ ಇಮ್ಮಡಿ ಮಾಧವನಿಗೆ ಮಕ್ಕಳಿರಲಿಲ್ಲವೆಂದು ಹೇಳಬೇಕಾಗುವುದು. ಗಂಗರ ತಾಮ್ರಶಾಸನಗಳಲ್ಲಿ ಆ ವಂಶದ ಪೀಳಿಗೆಯನ್ನು ಕೊಡುವಾಗ ಹಲವು ಶಾಸನಗಳು ಹರಿವರ್ಮನ ಅನಂತರ ವಿಷ್ಣುಗೋಪ ಪಟ್ಟಕ್ಕೆ ಬಂದನೆಂದು ತಿಳಿಸಿ ಇಮ್ಮಡಿ ಮಾಧವನ ಹೆಸರನ್ನು ಕೈಬಿಟ್ಟಿವೆ. ವಿಷ್ಣುಗೋಪನ ಸಂತತಿ ಮುಂದೆ ರಾಜ್ಯವಾಳಿದುದೇ ಇದಕ್ಕೆ ಕಾರಣವಿರಬೇಕು. ವಿಷ್ಣುಗೋಪರ್ನು ಯಾವದಾಯ; ಖಂಡಿತಮನೋತ್ಸಹನಾಗಿದ್ದನೆಂದು ಒಂದು ಶಾಸನ ತಿಳಿಸಿರುವುದರಿಂದ, ಇವನ ಆಳಿಕೆ ಬಹುಕಾಲ ನಡೆದಿರಬೇಕೆಂದು ರೈಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾರಸ್ಯದ ಸಂಗತಿಯೆಂದರೆ ಇದುವರೆಗೆ ಈತನ ಯಾವ ಶಾಸನಗಳೂ ದೊರೆತಿಲ್ಲ. ಇವನ ಪೀಳಿಗೆಯವರ ಶಾಸನಗಳಲ್ಲಿಯೂ ಇವನ ಬಗೆಗೆ ಹೆಚ್ಚಿನ ವಿವರಗಳೇನೂ ಕಂಡುಬರುವುದಿಲ್ಲ. ಇವನು ದ್ವಿಜಗುರುದೇವ ತಾಪೂಜನಪರನಾಗಿದ್ದ ನೆಂದು, ನಾರಾಯಣ ಚರಣಾನುಧ್ಯಾತನಾಗಿದ್ದನೆಂದು ಮಾತ್ರ ತಿಳಿಸುವುದರಿಂದ ಇವನಿಗೆ ರಾಜ್ಯಾಡಳಿತಕ್ಕಿಂತ ಹೆಚ್ಚಾಗಿ ಗುರುಹಿರಿಯರಲ್ಲಿ, ದೇವರಲ್ಲಿ ಇದ್ದ ಗೌರವ ವ್ಯಕ್ತವಾಗುತ್ತದೆ. ಶಕ್ರನಿಗೆ ಸಮಾನವಾದ ಪರಾಕ್ರಮವನ್ನು ಹೊಂದಿದ್ದನೆಂದು ಸಹ ಕೆಲವು ಶಾಸನಗಳು ತಿಳಿಸುವುದರಿಂದ ಇವನು ಪರಾಕ್ರಮಿಯೂ ಆಗಿದ್ದಿರಬೇಕು. ಇವನು ಜೈನಮತವನ್ನು ತ್ಯಜಿಸಿ ವೈದಿಕ ಮತವನ್ನವಲಂಬಿಸಿದನೆಂದೂ ವಿಷ್ಣು ಪೂಜಕನಾದನೆಂದೂ ಆದ್ದರಿಂದಲೇ ಹಿಂದೆ ಇಂದ್ರನು ಈ ವಂಶದ ಮೂಲ ಪುರುಷನಾದ ಪ್ರಿಯಬಂಧುವಿಗೆ ಕೊಟ್ಟಿದ್ದ ಐದು ಕುರುಹುಗಳು ಮಾಯವಾದುವೆಂದೂ ಕೆಲವು ಶಾಸನಗಳಲ್ಲಿ ಹೇಳಿಕೆಯಿದೆ.								
		(ಎಮ್.ಎಚ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ